ಸೋಮವಾರ, ಮಾರ್ಚ್ 9, 2009

ನನ್ನ ಅಮ್ಮ


ನನ್ನ ಅಮ್ಮನೂ .. ಸುಂದರಿ
ತೊಳೆದ ಮುತ್ತಿನ ಲಹರಿ
ಒಂದು ಕಾಲದಲ್ಲಿ...!!!

ಮುದ್ದುಕ್ಕುವ ಹಾಲ್ಗೆನ್ನೆ
ಮುಗ್ಧತೆ ಸೂಸುವ ಚಿಹ್ನೆ
ಹಳೇ ಭಾವ ಚಿತ್ರದಲ್ಲಿ...!!!

ನನ್ನಮ್ಮ ಒಲವಿನಿಂದ
ಕನಸುಗಳ ಲೋಕದಿಂದ
ಧುಮುಕಿದ್ದು ಸಂಸಾರ ಕೂಪದಲ್ಲಿ...!!!

ಕಟ್ಟಿದ ಕನಸುಗಳ ಬುತ್ತಿ
ಒತ್ತೊಟ್ಟಿಗಿಟ್ಟು , ಟೊಂಕ ಕಟ್ಟಿ,
ನಿಂತಿದ್ದು ಸಂಸಾರದ ದಾಳದಲ್ಲಿ...!!!

ಕಷ್ಟ ಕೋಟಲೆಗಳ ಜಂಜಾಟದಲ್ಲಿ
ನೊಂದು ನಲುಗಿ ಬಾಳಿನಲ್ಲಿ
ಈಗ ಒಣ ಹೂವಿನ ಮಲ್ಲಿ...!!!

ನೆರಿ ಬಿದ್ದ ಹಣೆ , ಮಾಸಿದ ಯೌವ್ವನ
ಗುಳಿಬಿದ್ದ ಕಣ್ಣು, ಸುಣ್ಣದ ಮೈ..
ಬದಲಾಗದ ವಾತ್ಸಲ್ಯದ ಮನ
ಈ ಬದಲಾದ ಕಾಲ ಚಕ್ರದಲ್ಲಿ...!!!

ಶುಕ್ರವಾರ, ಮಾರ್ಚ್ 6, 2009

ಜನನ

ತಾಯಿಯ ಗರ್ಭದಲ್ಲಿ...
ಮಗು ಪ್ರಥಮವಾಗಿ ಚಲಿಸಿದಂತೆ...
ಅತ್ತ-ಇತ್ತ ತೊನೆದಾಡಿ ಗುದ್ದಿದಂತೆ...
ನನ್ನಾಳದಲೀ ನಲಿಯುತ್ತಿತ್ತೊಂದು ಭಾವ;

ಕೊನೆಗೂ, ಹೃದಯ ಗರ್ಭದಲ್ಲಿ
ಕೊನರಿತೊಂದು ಪುಟ್ಟ ಕವಿತೆ
ಮಾತೆಯ ಮಮತೆಯೊಡಲಲ್ಲಿ
ಕುಡಿಯೊಂದು ಪಲ್ಲವಿಸಿದಂತೆ...

ವೈದ್ಯೆ ನೀಡಿದಳು ಸಲಹೆ
ಗೆಳತಿ ಹತ್ತು ಹಲವು ರೀತಿಯಲಿ
ಕರುಳ ಕುಡಿಯ ಭವಿಷ್ಯಕ್ಕೆ
ಬಾಳಿ ಬೆಳಗಲು ಮುಂದಕ್ಕೆ ....

ಕಣ್ಣು ತೆರೆಯುವ ಮೊದಲೇ
ಜಗಕ್ಕೆ ಬರುವ ಮುಂಚೆಯೇ
ಸಕಲ ರಾಸಾಯನಿಕಗಳ ಪಾನ
ಕೇಳಿಸಲಿಲ್ಲೆನಗೆ ಎಳೆಕಂದನ ರೋದನ ...

ಅಂತೂ ಕೊನೆಗೊಂದು ದಿನ
ರೂಪ ತಾಳಿತೊಂದು ಕವನ
ನವ ಶಿಶುವಿನ ಜನನ
ಅಯ್ಯೋ ಮಗು ಅಂಗಹೀನ ...!

ಬೆಳೆಯಬಿಟ್ಟಿದ್ದಾರೆ ಸ್ವೆಚೆಯಲಿ
ಇರುತ್ತಿತ್ತೆನೋ ಶಿಶು ಆರೋಗ್ಯದಲ್ಲಿ
ಹರಿಯ ಬಿಟ್ಟಿದ್ದರೆ ಸ್ವಂತ ಲಹರಿಯಲಿ...
ಮೂಡುತ್ತಿತ್ತೇನೋ ಕವನ ಅಂದದಲೀ......